ಭದ್ರಾವತಿ: ವಿಶ್ವಕ್ಕೆ ಸನಾನತ ಧರ್ಮದ ಮಹತ್ವವನ್ನು ತಿಳಿಸಿ ಪರಿಚಯಿಸಿದ ರಾಷ್ಟ್ರ ಎಂದರೆ ಅದು ಭಾರತ ಎಂಬುದು ಹೆಮ್ಮೆಯ ಸಂಗತಿ ಎಂದು ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ವೇದವ್ಯಾಸಾಚಾರ್ ಶ್ರೀಶಾನಂದ ತಿಳಿಸಿದರು.
ಅವರು ನಗರದ ಉಂಬ್ಳೆಬೈಲು ರಸ್ತೆಯ ಬೊಮ್ಮನಕಟ್ಟೆ ವಿಐಎಸ್‍ಎಲ್ ಹೆಲಿಪ್ಯಾಡ್ ಬಳಿ ಹಮ್ಮಿಕೊಂಡಿದ್ದ ತರಳಬಾಳು ಹುಣ್ಣಿಮೆ ಮಹೋತ್ಸವದ ಕಾರ್ಯಕ್ರಮದಲ್ಲಿ ನ್ಯಾಯಾಂಗ ಮತ್ತು ಸಮಾಜ ಎಂಬ ವಿಷಯದ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿ ಮಾತನಾಡಿದರು.
ಧರ್ಮ ಎಂಬುದಕ್ಕೆ ಸರಿಯಾದ ಸಮರ್ಪಕವಾದ ಅರ್ಥ ಇಲ್ಲ. ಆದರೆ ಧರ್ಮ ಮತ್ತು ರಿಲೀಜಿಯನ್ ಎರಡೂ ಒಂದೇ ಅಲ್ಲ ಅವುಗಳು ಬೇರೆ ಬೇರೆ ಹಾಗು ಪ್ರತ್ಯೇಕವಾದ ಅರ್ಥ ಇದೆ. ಆದರೆ ಧರ್ಮವು ಶಾಂತಿ ನೆಮ್ಮದಿಯನ್ನು ಭೋಧಿಸಬೇಕು. ಹಾಗು ಅದರಿಂದ ಎಲ್ಲರಿಗೂ ಒಳಿತಾಗಬೇಕು. ಆದರೆ ಧರ್ಮ ಹೆಸರಿನಲ್ಲಿ ಪಾಲನೆಯಲ್ಲಿ ಶಾಂತಿ ನೆಮ್ಮದಿಗೆ ಭಂಗ ಆದರೆ ಅದು ಧರ್ಮವೆ ಅಲ್ಲ ಎಂದರು.
ಋಷಿಗಳು ಅಂದರೆ ಸ್ವಂತಕ್ಕೆ ಏನನ್ನೂ ಇಟ್ಟುಕೊಳ್ಳದೆ ಸರ್ವವನ್ನು ಸಮಜಕ್ಕೆ ಅರ್ಪಿಸಿದವರು ಋಷಿಗಳಾಗುತ್ತಾರೆ. ಅದೇ ನಿಟ್ಟಿನಲ್ಲಿ ತಂದೆ ತಾಯಿ ತಮ್ಮ ಮಕ್ಕಳಿಗಾಗಿ ತಮ್ಮ ಸರ್ವಸ್ವವನ್ನು ಧಾರೆ ಎರೆದಿರುತ್ತಾರೆ. ತಂದೆ ತಾಯಿ ರಾಷ್ಟ್ರದ ಋಣವನ್ನು ತೀರಿಸುವುದು ಸಮಾಜದ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಧರ್ಮ ಪಾಲನೆ ಆಗಿ ಅದರಂತೆ ನಡೆದುಕೊಂಡಾಗ ನ್ಯಾಯ ಎಂಬುದು ತನ್ನಿಂದ ತಾನೆ ಬರುತ್ತದೆ. ಇಂದು ಸಮಾಜದಲ್ಲಿ ಸತ್ಯವನ್ನು ಹೇಳಲು ಭಯ ಪಡುವಂತಹ ವಾತಾವರಣ ನಿರ್ಮಾಣ ಆಗಿದೆ. ಧೈರ್ಯ ಸಾಲುತ್ತಿಲ್ಲ. ಆದರೆ ಸಮಸ್ಯೆಗಳ ಬಗ್ಗೆ ಸರಿ ತಪ್ಪುಗಳ ಬಗ್ಗೆ ಏನೂ ಹೇಳದೆ ಸಉಮ್ಮನಿರುವವರು ಹಾಗು ತಟಸ್ಥ ಮನೋಭಾವದರಿಂದ ಸಮಾಜದಲ್ಲಿ ಬಹಳಷ್ಟು ಸಮಸ್ಯೆಗಳು ಉಧ್ಭವಕ್ಕೆ ಕಾರಣವಾಗಿ ಅವುಗಳು ಪರಿಹಾರವಾಗದೆ ಹಾಗೆ ಉಳಿದಿರುವುದು ದುರಂತದ ಸಂಗತಿ ಎಂದರು.
ಇಂದು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಇನ್ನೋಬ್ಬರನ್ನು ಹೀಯಾಳಿಸುವುದು, ವಿನಾಕಾರಣ ಇನ್ನಿಲ್ಲದ ತೊಂದರೆಗಳನ್ನು ಕೊಡುವುದು ಸರಿಯಾದ ಸಂಗತಿಯಲ್ಲ. ನೈತಿಕ ಮೌಲ್ಯಾಧಾರಿತ ಶಿಕ್ಷಣವನ್ನು ನೀಡದಿರುವುದು ಇಂದಿನ ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣವಾಗಿದೆ. ಇದರಿಂದ ಪಾರಾಗಿ ತಮ್ಮತನವನ್ನು ಉಳಿಸಿಕೊಳ್ಳುವುದು ಹೇಗೆ ಎಂದು ಪ್ರಶ್ನಿಸಿದರು.
ಕುಟುಂಬದ ಹಿರಿಯರು ಯಾರು ಕೆಟ್ಟವರಲ್ಲ ಹಾಗಾದರೆ ಅವರ ಕುಟುಂಬದಲ್ಲಿ ಕಿರಿಯರು ಹೇಗೆ ಕೆಟ್ಟವರಾದರು? ಎಂದು ಪ್ರಶ್ನಿಸಿ ವಂಶವಾಹಿನಿಗಳು ಬರಬೇಕಿತ್ತು. ಆದರೆ ಬರಲಿಲ್ಲ. ಕುಟುಂಬದಲ್ಲಿ ಜನಿಸಿದ ಮೇಲೆ ಕುಟುಂಬದ ರೀತಿ ರಿವಾಜುಗಳ ಬಗ್ಗೆ ತಿಳಿಯಲಿಲ್ಲ ತಿಳಿದುಕೊಳ್ಳುವ ಪ್ರಯತ್ನ ಮಾಡಲಿಲ್ಲ. ಆದರೆ ಅದರ ಬದಲಿಗೆ ಪರಿಸ್ಥ್ತಿತಿ ವಾತಾವರಣ ಕೆಡಲು ಮುಖ್ಯ ಕಾರಣ ಎಂದು ವಿಶ್ಲೇಷಿಸಿದರು. ಇದರಿಂದ ಸಮಾಜ ಕುಟುಂಬದಲ್ಲಿ ಆಶಾಂತಿ ಉಂಟಾಗಿ ಸಂಘರ್ಷದ ವಾತಾವರಣ ನಿರ್ಮಾಣವಾಯಿತು. ಆದ್ದರಿಂದ ದ್ವೇಷ ಮತ್ತು ಪ್ರೀತಿಗಳನ್ನು ಸಮಾನ ಮಾಡಿಕೊಳ್ಳಿ ಆಗ ಎಲ್ಲದಕ್ಕೂ ಪರಿಹಾರ ದೊರೆಯುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
“ಪ್ರತಿಯೊಬ್ಬರ ಜಾತಿ ಧರ್ಮದ ಗ್ರಂಥಗಳು ಅವರವರ ಮನೆಯ ದೇವರ ಕೋಣೆಯಲ್ಲಿರಲಿ. ಆದರೆ ಮನೆಯಿಂದ ಹೊರ ಬಂದಾಗ ಸಂವಿಧಾನ ಎಂಬ ಗ್ರಂಥ ಎಂಬುದು ಸಾರ್ವಜನಿಕರ ಎಲ್ಲರದು ಎಂಬುದನ್ನು ಅರಿಯಬೇಕು. ಇದನ್ನು ಅಂದಿನ ಹಿರಿಯರು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರು, ಮೇಧಾವಿಗಳು, ಮಹಿಳೆಯರನ್ನು ಸೇರಿಸಿ ಸಂವಿಧಾನ ರಚನಾ ಸಮಿತಿಯನ್ನು ರಚಿಸಿ ಇದರ ಜೊತೆಗೆ ಬೇರೆ ಬೇರೆ ದೇಶದ ಸಂವಿಧಾನದ ಮಾಹಿತಿಯನ್ನು ತರಿಸಿ ಅವುಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿ ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ನಮ್ಮ ದೇಶದ ಸಂವಿಧಾನವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು ಎಂಬುದನ್ನು ಯಾರೂ ಮರೆಯಬಾರದು” ಎಂದರು.
ಹೈ ಕೋರ್ಟ್ ವಕೀಲರಾದ ಸಂದೀಪ್ ಪಾಟೀಲ್ ತಮ್ಮ ಉಪನ್ಯಾಸದಲ್ಲಿ ಇಂದಿನ ದಿನಗಳಲ್ಲಿ ಆಸ್ತಿ ಪ್ರಮಾಣ ಸಣ್ಣದಾಗಿದೆ. ಆದರೆ ಅದರ ಕುರಿತ ಜಗಳ ದೊಡ್ಡದಿದೆ. ಆ ಕಾರಣ ಸಣ್ಣ ಸಣ್ಣ ವಿಷಯಗಳು ಪ್ರತಿಷ್ಟೆಯಾಗಿ ನ್ಯಾಯಕ್ಕಾಗಿ ನ್ಯಾಯಾಲಯದ ಮೆಟ್ಟಿಲು ಹತ್ತುವಂತಾಗಿದೆ. ನಂತರ ಮುಂದೆ ನ್ಯಾಯಾಲಯದಲ್ಲಿ ನ್ಯಾಯ ನೀಡುವುದು ವಿಳಂಬ ಆಗುತ್ತಿದೆ ಎಂದು ನ್ಯಾಯಾಲಯ ನ್ಯಾಧೀಶರುಗಳನ್ನು ದೂರವ ಬದಲು, ಪರಸ್ಪರ ಕೂತು ಹೊಂದಾಣಿಕೆಯಿಂದ ಮಾತುಕತೆ ನಡೆಸಿಕೊಂಡೆ ವಿನಾಕಾರಣ ನ್ಯಾಯಾಲಯಕ್ಕೆ ಹೋಗುವ ಅವಶ್ಯಕತೆ ಇರುವುದಿಲ್ಲ. ಅಲ್ಲದೆ ಇದರಿಂದ ನ್ಯಾಯಾಲಯದ ಮೇಲಿನ ಒತ್ತಡವು ಕಡಿಮೆ ಆಗುತ್ತದೆ ಎಂದು ಸಲಹೆ ನೀಡಿದು.
ಮತ್ತೋರ್ವ ಹೈ ಕೋರ್ಟ್ ವಕೀಲರಾದಕೆ.ಬಿ.ವಾಣಿಗೌಡ ಮಾತನಾಡಿ ಹಿಂದಿನ ಕಾಲದಲ್ಲಿ ಯಾವುದೆ ವಿಚಾರ ವಿಷಯಗಳಿಗೆ ಒಮ್ಮೆ ಮಾತು ಕೊಟ್ಟರೆ ಮುಗಿತು. ಆದರಂತೆ ಚಾಚೂ ತಪ್ಪದೆ ನಡೆದುಕೊಳ್ಳಲಾಗುತ್ತಿತ್ತು. ಹಾಗಾಗಿ ನ್ಯಾಯಾಲಯದ ಅವಶ್ಯಕತೆ ಇರಲಿಲ್ಲ್ಲ. ಆದರೆ ಇಂದು ಪರಿಸ್ಥಿತಿ ತಿರುವು ಮುರುಗಾಗಿದ್ದು ಎಲ್ಲದಕ್ಕೂ ಕೊಟ್ಟ ಮಾತು ತಪ್ಪುತ್ತಿರುವ ಕಾರಣ ಎಲ್ಲಾ ವ್ಯಾಜ್ಯಗಳಿಗೂ ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗುವಂತಾಗಿರುವ ಕಾರಣ ನ್ಯಾಯಾಲಯಗಳ ಸ್ಥಾಪನೆಯಾಗುತ್ತಿದೆ. ಕಾನೂನು ಮತ್ತು ನೈತಿಕತೆ ಎಂಬುದು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇವೆರೆಡನ್ನು ಸಮನಾಗಿ ನೋಡಿದಾಗ ಶಾಂತಿ ನೆಮ್ಮದಿ ಎಂಬುದು ತನ್ನಿಂದ ತಾನೆ ದೊರೆಯುತ್ತದೆ ಎಂದರು. ಸಮಸ್ಯೆಯನ್ನು ಕೂತು ಮಾತುಕತೆ ನಡೆಸಿ ಪರಿಹಾರ ಕಂಡುಕೊಂಡರೆ ಯಾವುದೆ ಸಮಸ್ಯೆ ಎಂಬುದು ಇರುವುದಿಲ್ಲ ಎಂದರು.
ನವದೆಹಲಿಯ ಲೋಕಪಾಲ್ ನ್ಯಾಯಾಂಗ ಸದಸ್ಯರಾದ ಲಿಂಗಪ್ಪ ನಾರಾಯಣ ಸ್ವಾಮಿ, ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಹೊಸದುರ್ಗದ ಹೆಚ್. ಬಿಲ್ಲಪ್ಪ, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಜಿಲ್ಲಾ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಎಸ್.ಸಂತೊಷ್, ಇಂದಿರಾ ಸ್ವಾಮಿ ಮೈಲಚೆಟ್ಟಿಯಾರ್, ಶಾಸಕ ಬಿ.ಕೆ.ಸಂಗಮೇಶ್ವರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
30 ವರ್ಷದ ಕೇಸ್ 5 ಗಂಟೆಯಲ್ಲೆ ತೀರ್ಮಾನ:-
ಈ ಸಭೆಯಲ್ಲಿ ಸ್ವಾಮೀಜಿಯವರು ಸಭೆಯನ್ನು ಉದ್ದೇಶಿಸಿ ತಮ್ಮ ನ್ಯಾಯ ನೀಡುವ ಸಂಗತಿಗಳನ್ನು ಪ್ರತಿ ದಿನ ತಿಳಿಸುತ್ತಿದ್ದರು. ಅದಕ್ಕೆ ಸಾಕ್ಷಿಯಾಗಿ ಇಂದು ಇಲ್ಲಿಯ ಜನ್ನಾಪುರದ ಕುಟುಂಬವೊಂದು ತಮ್ಮ ಕುಟುಂಬದ ಆಸ್ತಿ ವಿಚಾರವಾಗಿ ಸ್ಥಳಿಯ, ಜಿಲ್ಲಾ, ಹೈ ಕೊರ್ಟ್‍ಗಳವರೆಗೆ ನ್ಯಾಯಕ್ಕಾಗಿ ಕಳೆದ ಮೂವತ್ತು ವರ್ಷಗಳಿಂದ ಅಲೆದಾಡುತ್ತಿದ್ದರು.
ಈ ಮಾಹಿತಿಯನ್ನು ಪಡೆದ ಸ್ವಾಮೀಜಿಗಳವರು ಆ ಎರಡೂ ಕುಟುಂಬದವರು ಹಾಗು ಅವರ ವಕೀಲರುಗಳನ್ನು ಕರೆಸಿ ನಿರಂತರವಾಗಿ ಐದು ಗಂಟೆಗಳ ಕಾಲ ಅದರ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿ ವಾದ ವಿವಾದಗಳನ್ನು ಆಲಿಸಿ ಅವರ ಸಮಸ್ಯೆಗೆ ತಮ್ಮ ಮಾತಿನ ಮೂಲಕ ಆಸ್ತಿ ವ್ಯಾಜ್ಯದ ಬಗ್ಗೆ ನ್ಯಾಯದ ತೀರ್ಪು ನೀಡಿದರು. ಅದಕ್ಕೆ ಎರಡೂ ಪಕ್ಷಗಳವರು ಒಪ್ಪಿ ತಮ್ಮ ತಮ್ಮ ಕೇಸುಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ವಾಪಸ್ ಪಡೆಯುವಂತೆ ತೀರ್ಪು ನೀಡಿದರು. ಅದಕ್ಕೆ ಎರಡೂ ಕಡೆಯವರು ಒಪ್ಪಿದರು. ಈ ಸಂಗತಿಗಳನ್ನು ಆ ಕುಟುಂಬಗಳ ಒಪ್ಪಿಗೆ ಮೇರೆ ಸಭೆಗೆ ತಿಳಿಸಿ ಅವರುಗಳನ್ನು ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಸನ್ಮಾನಿಸಿ ಗೌರವಿಸಿದರು. ಇದಕ್ಕೆ ಸಭೆಯು ಕರಡಾತನದಿಂದ ಮೆಚ್ಚುಗೆ ವ್ಯಕ್ತಪಡಿಸಿದರು.
ಇನ್ನೋಂದು ಕೇಸ್ ತಮ್ಮ ಮಠದ ವಿರುಧ್ಧ ನಡೆಯುತ್ತಿರುವ ಅಂಶವನ್ನು ಬಹಿರಂಗ ಪಡಿಸಿ ಈ ಕೇಸ್ ಸಭೆಯಲ್ಲಿ ಉಪಸ್ಥಿತರಿದ್ದ ನ್ಯಾಯಾಧೀಶರ ಬಳಿ ಬಂದಾಗ ಆ ಕೇಸ್‍ನ್ನು ತಾವು ನಡೆಸದೆ ಬೇರೆ ಬೆಂಚ್‍ಗೆ ವರ್ಗಾಯಿಸಬೇಕು ಎಂದು ಮನವಿ ಮಾಡಿ ಅಚ್ಚರಿ ಮೂಡಿಸಿದರು.
ಕಾರಣ ಹೇಳುತ್ತಾ ಆ ಕೇಸ್ ಬಗ್ಗೆ ನ್ಯಾಯ ನಮ್ಮ ಮಠದ ಪರ ತೀರ್ಪು ಬಂದರೆ ನ್ಯಾಯಾಧೀಶರು ಶ್ರೀ ಮಠದ ತರಳಬಾಳು ಹುಣ್ಣಿಮೆಯ ಸಮಾರಂಭದಲ್ಲಿ ಭಾಗವಹಿಸಿ ಸಭೆಯಲ್ಲಿ ಸ್ವಾಮೀಜಿಯವರ ಜೊತೆಗೆ ಕುಳಿತಿದ್ದರು. ಆ ಕಾರಣ ಅವರ ಮಠದ ಪರ ತೀರ್ಪು ನೀಡಿರಬಹುದು ಎಂಬ ಅನುಮಾನ ಹಾಗು ಅಪವಾದ ಬರಬಾರದು ಎಂಬ ಕಾರಣಕ್ಕೆ ಮನವಿ ಮಾಡಿದೆ ಎಂದರು.
ಹುಬ್ಬಳ್ಳಿಯ ಭೂಮಿಕಾ ಮತ್ತು ದೀಪಿಕಾ ಸಹೋದರಿಯರು ವಚನ ಗೀತೆ ಹಾಡಿದರು. ಸಿರಿಗೆರೆ ತರಳಬಾಳು ಕಲಾ ಸಂಘ ಶಿವಶರಣ ಹರಳಯ್ಯ ನೃತ್ಯ ರೂಪಕ, ದಾವಣಗೆರೆ ಶ್ರೀ ತರಳಬಾಳು ಜಗದ್ಗುರು ರೆಸಿಡೆನ್ಷಿಯಲ್ ಶಾಲೆಯ ಶ್ರೀನಿವಾಸ ಕಲ್ಯಾಣ, ಬೆಂಗಳೂರಿನ ಅಂತರಾಷ್ಟ್ರೀಯ ಭರತ ನಾಟ್ಯ ಕಲಾವಿದರಾದ ಯೋಗೇಶ್ ಮತ್ತು ಸ್ನೇಹ ನಾರಾಯಣ ನೃತ್ಯ ಝೇಂಕಾರ ಪ್ರದರ್ಶನ ನಡೆಸಿದರು.
ಪರಮೇಶ್ವರಪ್ಪ ಸ್ವಾಗತಿಸಿದರು. ನವೀನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

