ಹೊಸನಗರ-ಸಾಗರದ ಕಂದಾಯ ಇಲಾಖೆಯಲ್ಲಿ ದುಡ್ಡು ಕೊಟ್ಟರೆ ಸರ್ಕಾರದ ಜಾಗವನ್ನು ಯಾರಿಗೆ ಬೇಕಾ ದರೂ ಬರೆದು ಕೊಡುತ್ತಾರೆ. ತಹಶೀಲ್ದಾರ್, ಉಪವಿಭಾಗಾ ಧಿಕಾರಿಗಳಿಗೆ ದುಡ್ಡಿನ ಮುಂದೆ ಕಾನೂನು ಕಟ್ಟಳೆಗಳು ಯಾವುದೂ ಲೆಕ್ಕಕ್ಕೆ ಬರುತ್ತಿಲ್ಲ ವಂತೆ! ಇದಕ್ಕೊಂದು ತಾಜಾ ಉದಾಹರಣೆಯೆಂದರೆ ಹೊಸ ನಗರ ತಾಲ್ಲೂಕು ಕಸಬಾ ಹೋಬಳಿ ಹೊಸನಾಡು ಗ್ರಾಮದ ಸರ್ವೆ ನಂ. 205ರ ಜಮೀನು ಮಂಜೂರಾತಿಯ ಪ್ರಕರಣ!
ಹೌದು, ಅನಧಿಕೃತ ಸಾಗುವಳಿ ಸಕ್ರಮ ಸಮಿತಿಯ ಕಾರ್ಯ ದರ್ಶಿಯೂ ಆಗಿದ್ದ ಅಂದಿನ ತಹಶೀಲ್ದಾರ್, ರಾಜಸ್ವ ನಿರೀ ಕ್ಷಕರ ವರದಿಯಲ್ಲಿ ಯಾವುದೇ ಸಾಗುವಳಿ ಮಾಡುತ್ತಿಲ್ಲ ಎಂದು ವರದಿ ನೀಡಿದ್ದರೂ ಅದನ್ನು ಕಡೆಗಣಿಸಿ ಅಕ್ರಮ ಮಂಜೂರಾತಿ ಮಾಡಿದ್ದು, ಇದನ್ನು ಪ್ರಶ್ನಿಸಿದ ವರಿಗೆ ನ್ಯಾಯ ಇಂದಿಗೂ ಸಿಗುತ್ತಿಲ್ಲ. ಅಧಿಕಾರಿಗಳು ತಾವು ಮಾಡಿದ್ದೇ ಕಾನೂನು, ಆಡಿದ್ದೇ ಆಟ ಎಂದು ವರ್ತಿಸುತ್ತಿದ್ದಾರೆ.
ಏನಿದು ಪ್ರಕರಣ?
ಈ ಹಿಂದೆ ಹೊಸನಗರ ತಹಶೀಲ್ದಾರ್ ಆಗಿದ್ದ ರಾಜೀವ್ (ಪ್ರಸ್ತುತ ಶಿವಮೊಗ್ಗ ತಹ ಶೀಲ್ದಾರ್) ರಾಜಸ್ವ ನಿರೀಕ್ಷಕರ ಸ್ಥಳ ತನಿಖಾ ವರದಿಯನ್ನು ತಿಪ್ಪೆಗೆ ಹಾಕಿ, ಫಲಾನುಭವಿಗಳ ಪ್ರಭಾವ?!ಕ್ಕೊಳಗಾಗಿ ಭೋಜಪ್ಪ ಗೌಡ ಬಿನ್ ಕರಡಪ್ಪ ಗೌಡ ಎನ್ನುವ ವ್ಯಕ್ತಿಗೆ ದಿನಾಂಕ: 17-02-2023ರಲ್ಲಿ ಮಂಜೂ ರಾತಿಗೆ ಆದೇಶ ನೀಡಿದ್ದಾರೆ. ಈ ಬಗ್ಗೆ ದಿನಾಂಕ: 25-05-2023ರಂದು ಮಂಜೂರಾತಿ ನೀಡಬಾರದೆಂದು ಆಕ್ಷೇಪಿಸಿ ಗಣಪತಿಗೌಡ ತಕರಾರು ಅರ್ಜಿ ಸಲ್ಲಿಸಿದ್ದರೂ ಅದಕ್ಕೆ ಕ್ಯಾರೆ ಎನ್ನದ ತಹಶೀಲ್ದಾರ್ ರಾಜೀವ್ 23-06-2023ರಂದು ಭೂ ಮಂಜೂರಾತಿ ಪತ್ರವನ್ನೂ ನೀಡಿರುತ್ತಾರೆ. ಆಕ್ಷೇಪಣೆಯ ಪತ್ರವನ್ನು ಸ್ವೀಕರಿಸಿದ್ದರೂ ಅದನ್ನು ದಾಖಲಿಸದೇ ದುಂಡಾ ವರ್ತನೆ ಮೆರೆದಿದ್ದಾರೆ ತಹಶೀಲ್ದಾರ್ ರಾಜೀವ್!
ವಾಸ್ತವವಾಗಿ ಯಶೋಧಮ್ಮ ಕೋಂ ಭೋಜಪ್ಪಗೌಡ ಬಿನ್ ಕರಡಪ್ಪ ಗೌಡ ಅಲ್ಲಿ ಸಾಗುವಳಿ ಮಾಡುತ್ತಲೂ ಇಲ್ಲ. ಹೊಸ ನಾಡು ಗ್ರಾಮದ ಸರ್ವೆ ನಂಬರ್ 205ರ ಜಾಗದಲ್ಲಿ ಹಲವು ಖಾತೆದಾರರು ಜಮೀನು ಹೊಂದಿದ್ದು, ಇನ್ನುಳಿದ ಜಾಗ ವನ್ನು ಗೋಮಾಳ ಎಂದು ಗುರುತಿಸ ಲಾಗಿದೆ. ಆದರೆ, ಇಂತಹ ಜಾಗವನ್ನು ಮಂಜೂರು ಮಾಡಬೇಕಾದರೆ ಸಂಬಂಧಿಸಿದ ಇಲಾಖೆಗಳಿಂದ ಎನ್.ಓ.ಸಿ ಪಡೆಯಬೇಕು. ಹೊಸನಾಡು ಗ್ರಾಮದ ಸ.ನಂ. 205ರ ಜಾಗದಲ್ಲಿ ಗೋಮಾಳ ಎಂದು ಕಂದಾಯ ದಾಖಲೆ ಗಳಲ್ಲಿ ದಾಖಲಾಗಿದ್ದರೂ ಕಾಡುಜಾತಿಯ ಮರಗಳು ಬೆಳೆದಿರುವುದರಿಂದ ಅರಣ್ಯ ಇಲಾಖೆಯ ನಿರಾಪೇಕ್ಷಣ ಪತ್ರ ಪಡೆಯಬೇಕಿತ್ತು. ಆದರೆ ಇದ್ಯಾವುದರ ಉಸಾಬರಿಗೂ ಹೋಗದ ತಹಶೀಲ್ದಾರ್ ರಾಜೀವ್, ಅದ್ಯಾವ ಪ್ರಭಾವ ಕ್ಕೊಳಗಾಗಿ ಅಲ್ಲಿ ಯಶೋಧಮ್ಮ ಕೋಂ ಭೋಜಪ್ಪಗೌಡ ಬಿನ್ ಕರಡಪ್ಪಗೌಡ ಸಾಗುವಳಿ ಮಾಡುತ್ತಿದ್ದಾರೆಂದು ಮಂಜೂ ರಾತಿ ಆದೇಶ ನೀಡಿದರೋ ಗೊತ್ತಿಲ್ಲ.
ಸರ್ಕಾರಿ ಗೋಮಾಳದಲ್ಲಿ ಸಾಗುವಳಿ ಮಾಡದವರಿಗೆ ಮಂಜೂರಾತಿ!
ಹೊಸನಾಡು ಗ್ರಾಮದ ಸರ್ವೆ ನಂ. 205ರಲ್ಲಿರುವ ಸರ್ಕಾರಿ ಗೋಮಾಳದ ಜಾಗದಲ್ಲಿ ಇದುವರೆಗೂ ಯಶೋಧಮ್ಮ ಕೋಂ ಭೋಜಪ್ಪಗೌಡ ಬಿನ್ ಕರಡಪ್ಪ ಸಾಗುವಳಿ ಮಾಡೇ ಇಲ್ಲ. ಹಾಗಂತ ಸ್ವತಃ ಇಲ್ಲಿನ ಕಂದಾಯ ಅಧಿಕಾರಿಗಳೇ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಆದರೆ, ತಹಶೀಲ್ದಾರ್ ರಾಜೀವ್, ಈ ವರದಿಗಳನ್ನೆಲ್ಲಾ ತಿಪ್ಪೆಗೆ ಹಾಕಿ ಅಕ್ರಮ ಭೂ ಮಂಜೂರಾತಿ ಮಾಡಿದ್ದಾರೆ. ಇಲ್ಲಿ ಸಾಕಷ್ಟು ಹಣದ ವ್ಯವಹಾರ ನಡೆದಿರುವ ಅನುಮಾನಗಳು ಕಾಡುತ್ತಿವೆ.
ಎಸಿ ಕಚೇರಿಯಲ್ಲಿಯೂ ಅನ್ಯಾಯ:
ಅದ್ಯಾವಾಗ ತಹಶೀಲ್ದಾರ್ ರಾಜೀವ್ ಆರ್.ಐ. ಮತ್ತು ವಿ.ಎ. ವರದಿಯನ್ನು ತಿಪ್ಪೆಗಾಕಿ ಅಕ್ರಮವಾಗಿ ಮಂಜೂರಾತಿ ನೀಡಿದರೋ ಅದನ್ನು ಪ್ರಶ್ನಿಸಿ ಅದೇ ಹೊಸನಾಡು ಗ್ರಾಮದ ಗಣಪತಿಗೌಡ ಅಕ್ರಮ ಮಂಜೂರಾತಿಯನ್ನು ವಜಾ ಗೊಳಿಸಲು ಅರ್ಜಿ ಹಾಕಿ ಕೊಂಡರು. ಅಲ್ಲಿಂದ ಶುರುವಾ ಗಿದ್ದೆ ಅಧಿಕಾರಿಗಳು ನೌಕರರ ಹೊಸ ಆಟ. ತಹಶೀಲ್ದಾರ್ ರಾಜೀವ್ ಎಲ್ಲಾ ಸರಿ ಇದೆ ಎಂದು ಹಿಂಬರಹ ನೀಡಿ ಕೈ ತೊಳೆದುಕೊಂಡಿದ್ದರು. ಅದನ್ನು ಪ್ರಶ್ನಿಸಿ ಗಣಪತಿಗೌಡ ಸಾಗರ ಎಸಿ ನ್ಯಾಯಾಲಯದಲ್ಲಿ
ಮೇಲ್ಮ ನವಿ ಸಲ್ಲಿಸಿದರೆ ಅಲ್ಲಿಯೂ ಆಗಿದ್ದು ಅದೇ ಅನ್ಯಾಯ!

ಸಾಗರ ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾದಾಗಲೂ ಅಲ್ಲಿನ ಅಧಿಕಾರಿಗಳು ಗಣಪತಿ ಗೌಡರನ್ನು ಸಾಗಹಾಕುವ ಪ್ರಯತ್ನ ನಡೆಸಿದ್ದಾರೆ. ಆದರೆ, ಇದಕ್ಕೆ ಗಣಪತಿಗೌಡ ಬಗ್ಗದೇ ಇದ್ದಾಗ ಕಾಟಾಚಾರದ ವಿಚಾರಣೆಯನ್ನೂ ನಡೆಸಿದ್ದಾರೆ. ಗಣಪತಿಗೌಡರ ಮೇಲ್ಮನವಿ ಅಂಗವಾಗಿ ಎಸಿ ಕಚೇರಿಯಿಂದ ಸ್ಥಳಪರಿಶೀಲನೆ ನಡೆಸಿ ಮಧ್ಯಂತರ ವರದಿ ನೀಡುವಂತೆ 17-02-2025ರಂದು ಆದೇಶ ನೀಡಲಾಗಿತ್ತು. ಈ ಆದೇಶದಂತೆ ದಿನಾಂಕ: 14-07-2025 ರಂದು ತಹಶೀಲ್ದಾರ್ ಆಗಿದ್ದ ರಶ್ಮಿಯವರು ಈ ಹಿಂದೆ ರಾಜಸ್ವ ನಿರೀಕ್ಷಕರು ನೀಡಿದ್ದ ವರದಿ ಯಂತೆಯೇ ‘ಹೊಸನಾಡು ಗ್ರಾಮದ ಸರ್ವೆ ನಂಬರ್ 205ರಲ್ಲಿ ಭೋಜಪ್ಪ ಗೌಡ ಇವರಿಗೆ ಮಂಜೂರಾತಿ ಮಾಡಿ ರುವ ಜಮೀನಿನಲ್ಲಿ ಸಣ್ಣ ಸಣ್ಣ ಕುರುಚಲು ಗಿಡ ಮತ್ತು ಕಾಡು ಜಾತಿಯ ಗಿಡಗಳಿದ್ದು, ಯಾವುದೇ ಸಾಗುವಳಿ ಮಾಡಿ ಕೊಂಡು ಬಂದಿರುವುದಿ ಕಂಡು ಬಂದಿಲ್ಲ. ಅರ್ಜಿದಾರರ ಹೆಸರು ಗಳು ತಾಳೆಯಾಗುತ್ತಿಲ್ಲ ಎಂದು ವರದಿಯನ್ನು ನೀಡಿದ್ದರು.
ನೈಜ ವರದಿ ತಿಪ್ಪೆಗೆಸೆದು ಆದೇಶ ಮಾಡಿದ ಸಾಗರ ಎಸಿ:
ಹೀಗೆ ಗಣಪತಿ ಗೌಡ ಅವರ ಮೇಲ್ಮನವಿ ವಿಚಾರಣೆ ನಡೆಸಿದ ಸಾಗರ ಎಸಿ ವಿರೇಶ ಕುಮಾರ, ತಹಶೀಲ್ದಾರ್ ರಶ್ಮಿ ನೀಡಿದ್ದ ನೈಜ ವರದಿಯನ್ನು ತಿಪ್ಪೆಗೆಸೆದು, ಗಣಪತಿ ಗೌಡ ಅವರು ವೈಯಕ್ತಿಕ ದ್ವೇಷದಿಂದ ಭೋಜಪ್ಪಗೌಡರಿಗೆ ಮಂಜೂರಾತಿ ತಪ್ಪಿಸಲು ಈ ರೀತಿ ಮಾಡುತ್ತಿದ್ದಾರೆ. ಆದ್ದರಿಂದ ಇವರ ಮೇಲ್ಮನವಿಯನ್ನು ಪುರಸ್ಕರಿಸಲು ಬರುವುದಿಲ್ಲ ಎಂದು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ 22-09-2025ರಂದು ಆದೇಶ ಮಾಡಿ ಕೈತೊಳೆದುಕೊಂಡಿದ್ದಾರೆ. ಇದೀಗ ಈ ಆದೇಶವನ್ನು ಪ್ರಶ್ನಿಸ ಗಣಪತಿ ಗೌಡ ಅವರ ಪುತ್ರ ಶಿವರಾಜ್ ಜಿಲ್ಲಾಧಿಕಾರಿ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ. ಆದರೆ, ಹೊಸ ನಗರದ ಈಗಿನ ತಹಶೀಲ್ದಾರ್ ಮತ್ತು ನೌಕರರು ಪ್ರಕರಣ ಇನ್ನೂ ಬಾಕಿ ಇರುವಾಗಲೇ ಭೋಜಪ್ಪ ಗೌಡನ ಹೆಸರಿಗೆ ಮ್ಯುಟೇಷನ್ ಮಾಡಲು ಸಿದ್ಧರಾಗಿದ್ದಾರಂತೆ!

ಅನ್ಯಾಯ ಪ್ರಶ್ನಿಸಿದರೆ ಅಧಿಕಾರಿಗಳೇ ಧಮ್ಕಿ ಹಾಕ್ತಾರಂತೆ!
ಸಾಗರ ಎಸಿ ವಿರೇಶ ಕುಮಾರ ಪ್ರಕರಣದ ವಾಸ್ತವಾಂಶಗಳನ್ನು ನೋಡದೇ ಆದೇಶ ಮಾಡಿದ್ದಾ ರೆಂದು ಆ ಆದೇಶ ಪ್ರಶ್ನಿಸಿ ಶಿವರಾಜ ಜಿಲ್ಲಾಧಿಕಾರಿ ನ್ಯಾಯಾಲಯದ ಮೆಟ್ಟಿಲು ಏರಿದೆ, ಸಾಗರದ ಎಸಿ ಕಚೇರಿಯ ಅಧಿಕಾರಿಗಳಿಗೆ ಸಹಿಸಿಕೊಳ್ಳಲಾಗುತ್ತಿಲ್ಲವಂತೆ. ಕಚೇರಿಗೆ ಹೋಗಿದ್ದ ಶಿವರಾಜ ನನ್ನು ‘ನೀನು ಹೋರಾಟ ಮಾಡಲು ಹೋಗಿ… ಏನೋ ಆಗಬೇಡ’ ಎಂದೆಲ್ಲಾ ಪರೋಕ್ಷ ವಾಗಿ ಧಮ್ಕಿ ಹಾಕಿದ್ದಾರಂತೆ.
ಹೊಸನಗರ ತಾಲ್ಲೂಕು ಕಚೇರಿಯಲ್ಲಿ ರಾಜೀವ್ ತಹಶೀ ಲ್ದಾರ್ ಆಗಿದ್ದ ಸಂದರ್ಭದಲ್ಲಿ ಇಂತಹ ಹಲವು ಅಕ್ರಮ ಭೂ ಮಂಜೂರಾತಿಗಳು ಆಗಿದ್ದು, ಇದನ್ನು ಸಮಗ್ರ ತನಿಖೆಗೆ ಒಳ ಪಡಿಸಿದರೆ ಚಿಕ್ಕಮಗಳೂರಿನಲ್ಲಿ ನಡೆದಂತಹ ದೊಡ್ಡ ಭೂ ಹಗರಣವೇ ಬಯಲಿಗೆ ಬರುತ್ತ ದೇನೋ.. ಆದರೆ, ಇಲ್ಲಿನ ಅಕ್ರಮವಾಗಿ ಭೂಕಬಳಿಸುತ್ತಿರುವ ಕಬಂಧಬಾಹುಗಳ ಪ್ರಭಾವ ದಿಂದಾಗಿ ಹಗರಣಗಳು ಮುಚ್ಚಿ ಹೋಗುತ್ತಿವೆ. ಇನ್ನಾದರೂ ಕಂದಾಯ ಇಲಾಖೆ ಎಚ್ಚೆತ್ತು ಕೊಳ್ಳಬೇಕು. ಅಕ್ರಮ-ಸಕ್ರಮ ಮುಂತಾದ ಸರ್ಕಾರಿ ಯೋಜನೆ ಗಳು ಭೂ ಗಳ್ಳರ ಪಾಲಾಗದಂತೆ ಅರ್ಹರ ಪಾಲಿಗೆ ಸಿಗುವಂತಹ ಕೆಲಸ ಆಗಬೇಕಿದೆ.

