Home ಅಂತರಾಷ್ಟ್ರೀಯಅಂತರರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದು ಸಂಭ್ರಮಿಸಿದ ಡಾ. ರವಿ ಎಂ.

ಅಂತರರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದು ಸಂಭ್ರಮಿಸಿದ ಡಾ. ರವಿ ಎಂ.

ಥೈಲ್ಯಾಂಡ್‍ನಲ್ಲಿ ನಡೆದ ಅಂತರರಾಷ್ಟ್ರೀಯ ಈಜು ಸ್ಪರ್ಧೆ

by Editor

ಶಿಕಾರಿಪುರ ತಾಲ್ಲೂಕಿನ ಪಶುವೈದ್ಯರೊಬ್ಬರು ವೈದ್ಯಕೀಯ ವೃತ್ತಿಯ ಜೊತೆಗೆ ಕ್ರೀಡಾ ಸಾಧನೆ ಮಾಡುವ ಮೂಲಕ ಜಿಲ್ಲೆಗೆ, ಇಲಾಖೆಗೆ ಹಾಗೂ ಕ್ರೀಡಾ ಸ್ಪರ್ಧಿಗಳಿಗೆ ಕೀರ್ತಿ ತಂದಿದ್ದಾರೆ.
ಅಂತರರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ತಮ್ಮ ಮುಡಿಗೇರಿಸಿಕೊಂಡಿರುವ ಡಾ. ರವಿ ಎಂ. ಸಾಧನೆಯ ಮೂಲಕ ಜಿಲ್ಲೆಯ ಹೆಸರು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ.
ಡಾ. ರವಿ ಎಂ.ರವರು ಇತ್ತೀಚೆಗೆ (17ರಿಂದ 19 ಏಪ್ರಿಲ್ 2026) ಥೈಲ್ಯಾಂಡ್‍ನ ಶ್ರೀರಾಚಾದಲ್ಲಿ ನಡೆದ ವಲ್ರ್ಡ್ ಮಾಸ್ಟರ್ಸ್ ಈಜು ಸ್ಪರ್ಧೆಯಲ್ಲಿ 50 ವರ್ಷದ ಮೇಲ್ಪಟ್ಟ ವಿಭಾಗದ 50 ಮೀಟರ್ ಬಟರ್ ಫ್ಲೈ ಸ್ಟ್ರೋಕ್‍ನಲ್ಲಿ ಚಿನ್ನದ ಪದ ಮತ್ತು 100 ಮೀಟರ್ ಬ್ರೆಸ್ಟ್ ಸ್ಟ್ರೋಕ್‍ನಲ್ಲಿ ಬೆಳ್ಳಿ ಪದಕವನ್ನು ಗೆದ್ದು ತಮ್ಮ ಹಲವು ವರ್ಷಗಳ ಕನಸನ್ನು ನನಸಾಗಿಸಿಕೊಂಡಿದ್ದಾರೆ.
ಪ್ರಸ್ತುತ ಶಿಕಾರಿಪುರ ತಾಲೂಕಿನ ಮುಖ್ಯ ಪಶುವೈದ್ಯಾಧಿಕಾರಿಗಳು (ಆಡಳಿತ) ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇವರಿಗೆ ವೃತ್ತಿಯ ಜೊತೆಗೆ ಕ್ರೀಡೆಯನ್ನು ಪ್ರವೃತ್ತಿಯಾಗಿ ಬೆಳೆಸಿಕೊಂಡಿದ್ದಾರೆ. ಇವರ ಕ್ರೀಡಾಸಕ್ತಿಗೆ ನೀರೆರೆದು ಪೋಷಿಸಿದ್ದು, ಶಿವಮೊಗ್ಗದ ಸ್ಪೋಟ್ರ್ಸ್ ಕಾಂಪ್ಲೆಕ್ಸ್ ನಲ್ಲಿರುವ ಈಜು ಕೊಳದಲ್ಲಿ ತರಬೇತಿದಾರರು.

ಶಿವಮೊಗ್ಗ ಸ್ಪೋಟ್ರ್ಸ್ ಕಾಂಪ್ಲೆಕ್ಸ್‍ನ ಈಜು ತರಬೇತುದಾರರಾದ ಸಂಗಮೇಶ್ ಪಾರಶೆಟ್ಟಿ ಮತ್ತು ರಮೇಶ್ ಪಾರಶೆಟ್ಟಿ ಇವರ ಗರಡಿಯಲ್ಲಿ ತರಬೇತಿ ಪಡೆದಿದ್ದ ಡಾ. ರವಿ ಎಂ.ರವರು 50 ಮೀಟರ್ ಬಟರ್ ಫ್ಲೈ ಸ್ಟ್ರೋಕ್‍ನಲ್ಲಿ 11 ಸ್ಪರ್ಧಿಗಳ ಪೈಕಿ ಮೊದಲನೆಯವರಾಗಿ, 100 ಮೀಟರ್‍ನ ಬ್ರೆಸ್ಟ್ ಸ್ಟ್ರೋಕ್‍ನಲ್ಲಿ 13 ಸ್ಪರ್ಧಿಗಳ ಪೈಕಿ ಎರಡನೆಯವರಾಗಿ ಎರಡು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಡಾ. ರವಿ ಎಂ.ರವರು ಅಂತರರಾಷ್ಟ್ರೀಯ ಮಟ್ಟದ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಮುಖ್ಯವಾಗಿ ಇಲಾಖೆಯ ಅನುಮತಿ ಬೇಕಿತ್ತು. ಇಲಾಖೆಯ ಅಧಿಕಾರಿಗಳು ಅನುಮತಿ ನೀಡಬೇಕಿತ್ತು. ಶಿವಮೊಗ್ಗ ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ. ಬಾಬುರತ್ನ, ನಿರ್ದೇಶಕ ಡಾ. ಶ್ರೀನಿವಾಸ್‍ರವರು ಇಲಾಖೆಯ ಮುಖ್ಯಸ್ಥರನ್ನು ಒಪ್ಪಿಸಿದ್ದರೆ, ಪಶುಪಾಲನಾ ಇಲಾಖೆ ಆಯುಕ್ತರಾದ ಶ್ರೀಮತಿ ಶಿಲ್ಪಾ ನಾಗ್ ರವರು ಡಾ. ರವಿ ಎಂ.ರವರು ಥೈಲ್ಯಾಂಡ್‍ನಲ್ಲಿ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸಲು ಸರ್ಕಾರದಿಂದ ಸಿಗಬೇಕಾದ ಅನುಮತಿ ಮತ್ತಿತರೆ ಸೌಕರ್ಯಗಳನ್ನು ಒದಗಿಸಿಕೊಟ್ಟಿದ್ದರು.
ಈಗಾಗಲೇ ಈಜು ಸ್ಪರ್ಧೆಯಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹಲವಾರು ಪದಕಗಳನ್ನು ಗಳಿಸಿ ಯಶಸ್ಸು ಸಾಧಿಸಿದ್ದ ಡಾ. ರವಿ ಎಂ.ರವರ ಮೇಲೆ ಇಲಾಖೆಯ ಮೇಲಧಿಕಾರಿಗಳಿಗೆ ಅಂತರರಾಷ್ಟ್ರೀಯ ಸ್ಪರ್ಧೆಯಲ್ಲೂ ಏನಾದರೂ ಸಾಧಿಸುವರೆಂಬ ಭರವಸೆ ಇತ್ತು. ಅದನ್ನು ಡಾ. ರವಿಯವರು ಹುಸಿಗೊಳಿಸದೇ ಮೇಲ

ಧಿಕಾರಿಗಳ, ಶಿವಮೊಗ್ಗ ಸ್ಪೋಟ್ರ್ಸ್ ಕ್ಲಬ್‍ನವರ, ತರಬೇತುದಾರರ ಭರವಸೆಯನ್ನು ಈಡೇರಿಸುವುದರ ಜೊತೆಗೆ ತಮ್ಮ ಕನಸನ್ನೂ ನನಸು ಮಾಡಿಕೊಂಡಿದ್ದಾರೆ. ಆ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

 

ನನ್ನ ಈ ಸಾಧನೆಗೆ ಸಹಕಾರ ನೀಡಿದ, ನನ್ನ ಪ್ರೀತಿಯ ಪತ್ನಿ ಲೀನಾ, ಪುತ್ರರಾದ ಸಮರ್ಥ, ಆರುಷ್, ತಾಯಿ, ಕುಟುಂಬ ಸದಸ್ಯರು, ಸ್ನೇಹಿತರು, ಪಶು ಸಂಗೋಪನೆ ಇಲಾಖೆಯ ಕಾರ್ಯದರ್ಶಿ ಮತ್ತು ಆಯುಕ್ತರಾದ ಶಿಲ್ಪಾ ನಾಗ್, ಇಲಾಖೆಯ ನಿರ್ದೇಶಕರಾದ ಡಾ. ಶ್ರೀನಿವಾಸ್ ಸರ್, ಉಪ ನಿರ್ದೇಶಕರಾದ ಡಾ.ಬಾಬುರತ್ನ, ಶಿಕಾರಿಪುರ ತಾಲ್ಲೂಕು ಮಟ್ಟದ ಅಧಿಕಾರಿಗಳು, ತಾಲ್ಲೂಕಿನ ಎಲ್ಲಾ ಪಶುವೈದ್ಯರು ಮತ್ತು ಸಿಬ್ಬಂದಿ, ತರಬೇತುದಾರರಾದ ಸಂಗಮೇಶ್ ಪಾರಶೆಟ್ಟಿ, ರಮೇಶ್ ಪಾರಶೆಟ್ಟಿ, ಶಿವಮೊಗ್ಗ ಸ್ವಿಮ್ಮಿಂಗ್ ಅಸೋಶಿಷನ್ ಮಿತ್ರರಿಗೆ, ಈಜುಕೊಳದ ಸಿಬ್ಬಂದಿಗೆ ಹಾಗೂ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಡಾ. ರವಿ ಎಂ.ರವರು ಕೃತಜ್ಞತೆಗಳನ್ನು ತಿಳಿಸಿದ್ದಾರೆ.
ಇವರ ಸಾಧನೆಗೆ ‘ಸುದ್ದಿ ಸಾರ’ ಪತ್ರಿಕೆ ಬಳಗವು ಶುಭ ಹಾರೈಸುತ್ತಿದೆ.
– ಜಿ.ಆರ್.ಎಸ್.

ನನ್ನ ಸಾಧನೆಗೆ ಪರೋಕ್ಷವಾಗಿ ಪ್ರತ್ಯಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು. ನಾನು ಗೆದ್ದಿರುವ ಎರಡು ಪದಕಗಳನ್ನು ಮೂಕ ಪ್ರಾಣಿಗಳಿಗೆ ಹಾಗೂ ಹಗಲಿರುಳು ಅವುಗಳ ಸೇವೆಯನ್ನು ಮಾಡುತ್ತಿರುವ ನನ್ನೆಲ್ಲಾ ಪಶುವೈದ್ಯ ಮಿತ್ರರಿಗೆ ಹಾಗೂ ಸಿಬ್ಬಂದಿಗಳಿಗೆ ಅರ್ಪಿಸುತ್ತಿದೇನೆ.
– ಡಾ. ರವಿ ಎಂ.

You may also like

Leave a Comment

ಈಶ್ವರಪ್ಪ ಹೇಳಿಕೆಗೆ ಸಿ.ಜಿ. ಮಧುಸೂದನ್ ಖಂಡನೆ   ಅಂತರರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದು ಸಂಭ್ರಮಿಸಿದ ಡಾ. ರವಿ ಎಂ.   ಮೇ 16 ರಂದು ಕ್ಯಾನ್ಸರ್ ತಪಾಸಣಾ ಪ್ಯಾಕೇಜ್ ಉದ್ಘಾಟನಾ ಮತ್ತು ಮ್ಯಾಮೋಗ್ರಫಿ ಘಟಕದ ಉದ್ಘಾಟನಾ ಸಮಾರಂಭ   ಶಿಕ್ಷಣದಿಂದ ಮಾತ್ರ ಸಾಮಾಜಿಕ ನ್ಯಾಯ ಸಾಧ್ಯ: ಸಚಿವ ಮಧು ಬಂಗಾರಪ್ಪ   ಸಮಾಜಸೇವಾ ಕಾರ್ಯಕರ್ತೆ ಕಲಾವಿದೆ ಕೆ.ಹೆಚ್.ಸುಮಿತ್ರ ಸುಮಗೆ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿಯ ಗರಿ ಸಾಧನೆಯ ಹೆಜ್ಜೆಗುರುತು.