ತೀರ್ಥಹಳ್ಳಿ: ತೀರ್ಥಹಳ್ಳಿ ಸಮೀಪ ಸರಳ ಗ್ರಾಮದಲ್ಲಿರುವ ಎಮ್.ಐ.ಓ. ಕ್ಯಾನ್ಸರ್ ಆಸ್ಪತ್ರೆಯಲ್ಲಿ ಮೇ 16 ರಂದು ಬೆಳ್ಳಿಗೆ 11.30 ಕ್ಕೆ ಕ್ಯಾನ್ಸರ್ ತಪಾಸಣಾ ಪ್ಯಾಕೇಜ್ ಉದ್ಘಾಟನಾ ಮತ್ತು ಮ್ಯಾಮೋಗ್ರಫಿ ಘಟಕದ ಉದ್ಘಾಟನಾ ಸಮಾರಂಭವನ್ನು ಎಮ್.ಐ.ಓ ಆಸ್ಪತ್ರೆ ಮತ್ತು ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದೆ.

ಸಮಾರಂಭದ ಅಧ್ಯಕ್ಷತೆಯನ್ನು ಎಮ್.ಐ.ಓ. ನಿರ್ದೇಶಕರಾದ ಡಾ.ಡಿ. ಸುರೇಶ್ ರಾವ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರ, ಮಾಜಿ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ್, ಡಿಸಿಸಿ ಬ್ಯಾಂಕ್, ಶಿವಮೊಗ್ಗ ಹಾಗೂ ರಾಜ್ಯ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಕರ್ನಾಟಕ ಸರ್ಕಾರ ಇದರ ಅಧ್ಯಕ್ಷರಾದ ಡಾ ಆರ್ ಎಂ ಮಂಜುನಾಥ ಗೌಡ, ತೀರ್ಥಹಳ್ಳಿಯ ಸಹ್ಯಾದ್ರಿ ಪಾಲಿಟೆಕ್ನಿಕ್ ಮ್ಯಾನೇಜಿಂಗ್ ಟ್ರಸ್ಟಿ ಅನಿತಾ ನಾಗರಾಜ, ವಾಗ್ಗೇವಿ ಚಾರಿಟಬಲ್ ಟ್ರಸ್ಟ್, ತೀರ್ಥಹಳ್ಳಿ ಇದರ ವೈದ್ಯರಾದ ಯು. ರವಿರಾಜ್, ಕ್ಯಾನ್ಸರ್ ಅಂದೋಲನ ಸಮಿತಿ ಶಿವಮೊಗ್ಗ ಮುಖ್ಯ ಸಂಯೋಜಕರಾದ ಅ ನಾ ವಿಜಯೇಂದ್ರ ರಾವ್, ತೀರ್ಥಹಳ್ಳಿಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಟಿ.ಕೆ.ರಮೇಶ್ ಶೆಟ್ಟಿ ಇವರುಗಳು ಆಗಮಿಸಲಿದ್ದಾರೆ.
ಎಂ.ಐ.ಒ ತೀರ್ಥಹಳ್ಳಿ ಸ್ಪೆಶಾಲಿಟಿ ಕ್ಯಾನ್ಸರ್ ಆಸ್ಪತ್ರೆಯು ತೀರ್ಥಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮೀಣ ಜನರಿಗೆ ಕ್ಯಾನ್ಸರ್ ತಪಾಸಣಾ ಸೇವೆಯನ್ನು ಕೈಗೆಟುಕುವ ದರದಲ್ಲಿ ತಲುಪಿಸುವ ಸಂಕಲ್ಪದೊಂದಿಗೆ ವಿಶೇಷ ತಪಾಸಣಾ ಕಾರ್ಯಕ್ರಮವನ್ನು ಆರಂಭಿಸುತ್ತಿದೆ.

ಈ ಶುಭ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಮ್ಯಾಮೋಗ್ರಫಿ ಘಟಕವನ್ನೂ ಉದ್ಘಾಟಿಸಲಾಗುತ್ತಿದ್ದು, ಇದರಿಂದ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ. ಕ್ಯಾನ್ಸರ್ ಚಿಕಿತ್ಸೆಗಾಗಿ ದೂರದ ನಗರಗಳಿಗೆ ಹೋಗಬೇಕಾದ ಅಗತ್ಯವಿಲ್ಲದಂತೆ, ತೀರ್ಥಹಳ್ಳಿಯ ಜನರ ಮನೆ ಬಾಗಿಲಿಗೇ ವಿಶ್ವಮಟ್ಟದ ಕ್ಯಾನ್ಸರ್ ತಪಾಸಣಾ ಸೇವೆಯನ್ನು ತರುವುದು ಅಸ್ಪತ್ರೆಯ ಗುರಿಯಾಗಿದೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾರ್ವಜನಿಕರು ಆಗಮಿಸಬೇಕೆಂದು ಅಸ್ಪತ್ರೆಯ ಸರ್ಜಿಕಲ್ ಅಂಕೋಲಾಜಿಸ್ಟ್ ಡಾ ದಿವ್ಯ ಜ್ಯೋತಿ ಎನ್. ಕೋರಿದ್ದಾರೆ.

