ಶಿವಮೊಗ್ಗ : ಬಡತನ ರೇಖೆಗಿಂತ ಕೆಳಮಟ್ಟದ ಕುಟುಂಬದ ಯಾವುದೆ ಸದಸ್ಯರು ಮೃತಪಟ್ಟಲ್ಲಿ ಅವರ ಅಂತ್ಯಕ್ರಿಯೆ ನೆರೆವೇರಿಸಲು ನೀಡುತ್ತಿದ್ದ ಸಹಾಯಧನ ನೀಡುವುದನ್ನು ಮುಂದುವರಿಸಬೇಕು ಎಂದು ಆಗ್ರಹಿಸಿ ಇಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಗಾಂಧಿ ಪ್ರತಿಮೆ ಎದುರು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದರು.
ಸರ್ಕಾರ ಈ ಹಿಂದೆ ಸದಸ್ಯರಿಗೆ 2008 ರಿಂದ 5000 ರೂಪಾಯಿಗಳ ಸಹಾಯ ಧನ ನೀಡುವ ಅಂತ್ಯ ಸಂಸ್ಕಾರ ಯೋಜನೆಯನ್ನು ಹೊಂದಿತ್ತು. ಆದರೆ ರಾಜ್ಯ ಸರ್ಕಾರ 01-09-2021 ರಿಂದ ಅಮಾನವೀಯವಾಗಿ ರದ್ದುಗೊಳಿಸಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ರವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೂಡಲೆ ಇದನ್ನು ಮರು ಜಾರಿಗೊಳಿಸಿ, ಈ ಹಿಂದೆ ನೀಡುತ್ತಿದ್ದ 5000 ರೂಪಾಯಿಗಳ ಸಹಾಯಧನದ ಬದಲು 10,000/- ರೂಪಾಯಿ ಸಹಾಯ ಧನ ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಅಂತ್ಯ ಸಂಸ್ಕಾರ ಯೋಜನೆ ಕೇವಲ ಕರ್ನಾಟಕ ಸರ್ಕಾರದಿಂದಲೆ 2006 ರಿಂದ ಜಾರಿಗೊಳಿಸಲಾಗಿತ್ತು. ಈ ಜೀವಪರ ಹಾಗೂ ಜನಪರ ಅಂತ್ಯ ಸಂಸ್ಕಾರ ಯೋಜನೆಯನ್ನು ದಿನಾಂಕ:01-09-2021 ರಿಂದ ಅವೈಜ್ಞಾನಿಕವಾಗಿ ಹಾಗೂ ಮನುಷ್ಯ ವಿರೋದಿಯಾಗಿ ರದ್ದುಗೊಳಿಸಿ ಬಡವರ ಸಾವಿನ ಜೊತೆ ಸರ್ಕಾರ ಹಾಗೂ ಅಧಿಕಾರಿಗಳು ದೌರ್ಜನ್ಯವೆಸಗಿದರು. ಬಿಪಿಎಲ್ ಕಾರ್ಡ್ ಹೊಂದಿರತಕ್ಕ ಬಡ ಕುಟುಂಬದ ಯಾವುದೇ ಧರ್ಮ ಅಥವಾ ಜಾತಿಗೆ ಸಂಬಂಧಪಟ್ಟ ವ್ಯಕ್ತಿ ಯಾವುದೇ ಕಾರಣದಿಂದ ಮೃತರಾದರೂ ರಾಜ್ಯ ಸರ್ಕಾರ ಅಂತ್ಯ ಸಂಸ್ಕಾರ ಯೋಜನೆಯಲ್ಲಿ 2006 ರಿಂದ 2021ರ ವರೆಗೆ 5000 ರೂಪಾಯಿಗಳ ಸಹಾಯ ಧನವನ್ನ ಮೃತರ ಅಂತ್ಯ ಕ್ರಿಯೆಯನ್ನ ನಡೆಸುವ ವಾರಸುದಾರರಿಗೆ ನೀಡಿ ಹೃದಯವಂತಿಕೆಯನ್ನ ಮೆರೆಯಲಾಗುತ್ತಿತ್ತು. ಆದರೆ ಈ ಯೋಜನೆಯನ್ನ 01-09-2021 ರಿಂದ ಮುಕ್ತಾಯಗೊಳಿಸಿರುವುದು ವಿಷಾದನೀಯ ಸಂಗತಿಯಾಗಿದೆ.
ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಕಳೆದ 4 ವರ್ಷಗಳಿಂದ ಬಡ ಕುಟುಂಬಗಳ ವಿರೋಧಿಯಾಗಿ ರದ್ದುಗೊಳಿಸಿರುವ ಈ ಅಂತ್ಯ ಸಂಸ್ಕಾರ ಯೋಜನೆಯನ್ನ ಮರು ಜಾರಿಗೊಳಿಸಿ ಈ ಹಿಂದೆ ನೀಡುತ್ತಿದ್ದ 5,000/-ರೂಪಾಯಿ ಸಹಾಯ ಧನವನ್ನ 10,000 ರೂಪಾಯಿಗೆ ಹೆಚ್ಚಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್, ಜನಮೇಜಿರಾವ್, ಹೆಚ್.ಎಂ.ಸಂಗಯ್ಯ, ಅರಸಾಳು ರಘುನಾಥ್, ಸಿ.ಶಂಕ್ರಪ್ಪ, ಲಿಂಗರಾಜು, ಶಿವಣ್ಣ ಎಸ್.ಪಿ., ಬಸವರಾಜ್, ಹಯಾತ್‍ಸಾಬ್, ವೇದಾಂತ್ ಗೌಡ, ಧರ್ಮರಾಜ್ ಮೊದಲಾದವರಿದ್ದರು.
ಅಂತ್ಯಕ್ರಿಯೆಗೆ ನೀಡುತ್ತಿದ್ದ ಸಹಾಯಧನ ಮುಂದುವರೆಸಲು ಆಗ್ರಹ
182
previous post

