Home ಅಂತರಾಷ್ಟ್ರೀಯದಸರಾ ಉತ್ಸವ ಯಶಸ್ವಿ, ಅವಘಡಕ್ಕೆ ನಾವೆಲ್ಲರೂ ಹೊಣೆಗಾರರು: ಚನ್ನಬಸಪ್ಪ

ದಸರಾ ಉತ್ಸವ ಯಶಸ್ವಿ, ಅವಘಡಕ್ಕೆ ನಾವೆಲ್ಲರೂ ಹೊಣೆಗಾರರು: ಚನ್ನಬಸಪ್ಪ

Dasara festival was a success; we are all responsible for the untoward incident: Channabasappa

by Editor

ಶಿವಮೊಗ್ಗ: ಎಲ್ಲರ ಪರಿಶ್ರಮದಿಂದ ಈ ಬಾರಿಯ ಶಿವಮೊಗ್ಗ ದಸರಾ ಅದ್ಧೂರಿಯಾಗಿ ಯಶಸ್ಸು ಕಂಡಿದೆ. ಈ ನಡುವೆ ಒಂದು ಸಣ್ಣ ಅವಘಡ ಸಂಭವಿಸಿದ್ದು, ಅದಕ್ಕೆ ನಾವೆಲ್ಲರೂ ಹೊಣೆಗಾರರಾಗಿದ್ದೇವೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಒಂದೂವರೆ ತಿಂಗಳಿಂದ 14 ಸಮಿತಿ ರಚನೆ ಮಾಡಿ ಭರದ ಸಿದ್ಧತೆ ನಡೆಸಲಾಗಿತ್ತು. ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಅರಣ್ಯ ಇಲಾಖೆ ಮತ್ತು ವಿವಿಧ ಇಲಾಖೆಗಳ ಸಿಬ್ಬಂದಿಗಳು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಸಾರ್ವಜನಿಕರು ಕೂಡ ದಸರಾದ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸಿ ಯಶಸ್ವಿ ಮಾಡಿದ್ದಾರೆ. ಪೌರ ಕಾರ್ಮಿಕರು ಅಗಲಿರುಳು ದುಡಿದಿದ್ದಾರೆ. ಅತ್ಯಂತ ಜವಾಬ್ದಾರಿಯಿಂದ ನಿರ್ವಹಣೆ ಮಾಡಿದ್ದಾರೆ. ಇಡೀ ಊರಲ್ಲಿ ಹಬ್ಬದ ವಾತಾವರಣ ಕಂಡುಬಂದಿತ್ತು. ಅದಕ್ಕಾಗಿ ವಿಶೇಷ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

 

ಚಾಮುಂಡೇಶ್ವರಿ ದೇವಿಯ ಆಶೀರ್ವಾದದ ಪರಿಣಾಮ ಒಂದೇ ಒಂದು ಸಣ್ಣ ಅವಘಡವೂ ಆಗದೇ ದಸರಾ ಸಂಪನ್ನಗೊಂಡಿದೆ. ದೇವಿ ತನ್ನ ಒಂದು ಕೈಯನ್ನು ಕಳೆದುಕೊಂಡು ಭಕ್ತರನ್ನು ಕಾಪಾಡಿದ್ದಾಳೆ. ಮಾವುತನ ರಕ್ಷಣೆಯಾಗಿದೆ. ಪವಾಡಸದೃಶ ರೀತಿಯಲ್ಲಿ ಸಾಂಗವಾಗಿ ದಸರಾ ಸಂಪನ್ನಗೊಂಡಿದ್ದಕ್ಕೆ ತಾಯಿಗೆ ಭಕ್ತಿಪೂರ್ವಕ ಕೃತಜ್ಞತಾ ನಮನಗಳನ್ನು ಸಮರ್ಪಿಸುವುದಾಗಿ ತಿಳಿಸಿದರು.
ಹಿರಿಯರು ನಿನ್ನೆಯ ಲೋಪಕ್ಕೆ ಕೆಲವು ಧಾರ್ಮಿಕ ವಿಧಿ ವಿಧಾನಗಳನ್ನು ಮಾಡಬೇಕು ಎಂದು ಹೇಳಿದ್ದಾರೆ. ಕೆಲವೊಂದು ಭಾವನಾತ್ಮಕ ಯೋಚನೆಗಳಿವೆ. ಸಚಿವರ ಜೊತೆಗೆ ಮಾತುಕತೆ ನಡೆಸಿ ಹೊಸ ವಿಗ್ರಹ ನಿರ್ಮಾಣಕ್ಕೆ ಮತ್ತೆ ಯಥಾಸ್ಥಿತಿಯಲ್ಲಿ ಚಾಮುಂಡೇಶ್ವರಿ ವಿಗ್ರಹ ನಿರ್ಮಾಣಕ್ಕೆ ಪಾಲಿಕೆ ವತಿಯಿಂದಲೇ ಕ್ರಮ ಕೈಗೊಳ್ಳಲಾಗುವುದು. ಇದು ಊರ ಹಬ್ಬವಾಗಿದ್ದು, ಅವಘಡ ಆದಾಗ ನಾವು ಜವಾಬ್ದಾರರಲ್ಲ ಅನ್ನುವ ಮಾನಸಿಕತೆ ನಮ್ಮಲ್ಲಿ ಇಲ್ಲ. ಎಲ್ಲರೂ ಜವಾಬ್ದಾರಿಯಾಗಿದ್ದು, ಇದೊಂದು ಎಚ್ಚರಿಕೆಯ ಗಂಟೆ ಎಂದರು.

ಮೊದಲ ಬಾರಿ ಈ ಆನೆಗೆ ಅಂಬಾರಿ ಹೊರಿಸಿದ್ದು, ಹೀಗಾಗಿರಬಹುದು. ಸಾಗರ್ ಆನೆಗೂ ಮೊದಲ ಬಾರಿ ಅನುಭವ ಇರಲಿಲ್ಲ. ಲೋಪಗಳಿದ್ದರೆ ತನಿಖೆ ನಡೆಯುತ್ತದೆ. ಅನುಮಾನಗಳಿಗೆ ನಮ್ಮ ವಿರೋಧವಿಲ್ಲ. ಮುಂದಿನ ವರ್ಷವೂ ಅಂಬಾರಿ ನಡೆಯಬೇಕು. ನೂತನ ಪ್ರತಿಮೆ ನಿರ್ಮಾಣವಾಗುತ್ತದೆ. ಕಾನೂನು ರೀತಿಯ ವಿಮೆ ವಗೈರೆ ಇರುತ್ತದೆ. ದೇವಿಯ ಒಂದೂ ಆಭರಣ ವ್ಯತ್ಯಾಸವಾಗಿಲ್ಲ. ಎಲ್ಲವೂ ಇದೆ. ಪಾಲಿಕೆಯದ್ದೇ ನಾಗರಿಕರ ಹಣದಲ್ಲೇ ಈ ಕಾರ್ಯ ನಡೆಯುತ್ತದೆ. ತನಿಖೆಗೆ ನಾನು ಒತ್ತಾಯ ಮಾಡಲ್ಲ ಎಂದರು.
ಚಾಮುಂಡೇಶ್ವರಿ ನಮ್ಮನ್ನೆಲ್ಲರನ್ನೂ ರಕ್ಷಿಸಿದ್ದಾಳೆ. ಅರಣ್ಯ ಇಲಾಖೆಯವರು ಕೂಡ ನಿಷ್ಠೆಯಿಂದ ತಮ್ಮ ಕಾರ್ಯ ಮಾಡಿದ್ದಾರೆ. ರಕ್ಷಣಾ ಇಲಾಖೆ ಮತ್ತು ಸಂಘ ಸಂಸ್ಥೆಗಳು ನಮ್ಮೊಂದಿಗೆ ಕೈಜೋಡಿಸಿವೆ. ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಆರ್.ಎಸ್.ಎಸ್.ನ ವಿಜಯದಶಮಿ ಪಥಸಂಚಲನದಲ್ಲಿ ನಾನು ಭಾಗವಹಿಸುತ್ತೇನೆ. ಅದೊಂದು ರಾಷ್ಟ್ರೀಯ ದೊಡ್ಡ ಸಂಸ್ಥೆಯಾಗಿದ್ದು, ಕಡ್ಡಾಯ ಅನುಮತಿ ಬಗ್ಗೆ ಸಂಘದ ಪ್ರಮುಖರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಪ್ರತಿಕ್ರಿಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಸ್.ಜ್ಞಾನೇಶ್ವರ್, ಮೋಹನ್ ರೆಡ್ಡಿ, ಪ್ರಭಾಕರ್, ಶ್ರೀನಾಗ್, ನವುಲೆ ಮಂಜುನಾಥ್ ಮತ್ತಿತರರು ಇದ್ದರು.

You may also like

Leave a Comment

➤ ದಸರಾ ಮೆರವಣಿಗೆಯಲ್ಲಿ ಅನಾಹುತ: ಮುಂದಿನ ಕ್ರಮದ ಬಗ್ಗೆ ಚರ್ಚೆ   ➤ ದಸರಾ ಉತ್ಸವ ಯಶಸ್ವಿ, ಅವಘಡಕ್ಕೆ ನಾವೆಲ್ಲರೂ ಹೊಣೆಗಾರರು: ಚನ್ನಬಸಪ್ಪ   ➤ ಶಿವಮೊಗ್ಗ ಜಿಲ್ಲೆಯ ಕಾಮಗಾರಿ ಬಾಕಿ 1800 ಕೋಟಿ ಬಿಡುಗಡೆಗೆ ಗುತ್ತಿಗೆದಾರರ ಸಂಘ ಆಗ್ರಹ   ➤ ‘ಶಿವಮೊಗ್ಗ ಸಿನಿ ದಸರಾ’ ಉದ್ಘಾಟಿಸಲಿರುವ ರಾಜೇಂದ್ರ ಸಿಂಗ್ ಬಾಬು, ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ ಮಾಹಿತಿ   ➤ ಕೂಡಲಿ ಶೃಂಗೇರಿ ಮಠದಲ್ಲಿ ವೈಭವದ ಶರನ್ನವರಾತ್ರಿ ಮಹೋತ್ಸವ: ಪ್ರತಿದಿನ ಹೋಮ, ಹವನ