ಶಿವಮೊಗ್ಗ: ಶಿವಮೊಗ್ಗದಲ್ಲಿಯೇ ಹೈಕೋರ್ಟ್ ಪೀಠ ಸ್ಥಾಪಿಸಲು ಒತ್ತಾಯಿಸಿ ವಕೀಲ ಸಂಘ, ಹೈಕೋರ್ಟ್ ಪೀಠ ಹೋರಾಟ ಸಮಿತಿ ವತಿಯಿಂದ ಇಂದು ವಕೀಲರ ಭವನದ ಎದುರು ಎರಡನೇ ಹಂತದ ಹೋರಾಟಕ್ಕೆ ಚಾಲನೆ ನೀಡಲಾಯಿತು.
ದೀಪ ಬೆಳಗುವ ಮೂಲಕ ಹೋರಾಟಕ್ಕೆ ಚಾಲನೆ ನೀಡಿ ಮಾತನಾಡಿದ ಹೊಸನಗರ ಕ್ಷೇತ್ರದ ಮಾಜಿ ಶಾಸಕ ಸ್ವಾಮಿರಾವ್, ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸುವ ಸಾಧ್ಯತೆಯನ್ನು ಪರಿಶೀಲಿಸಲು ಮೂವರು ನ್ಯಾಯಮೂರ್ತಿಗಳ ಸಮಿತಿ ರಚಿಸಿರುವುದು ತಾತ್ಕಾಲಿಕ ಕಣ್ಣೊರೆಸುವ ಪ್ರಯತ್ನವಾಗಿದೆ. ಮಧ್ಯ ಕರ್ನಾಟಕದ ಜನರ ಅನುಕೂಲಕ್ಕಾಗಿ ಸಂಚಾರಿ ಪೀಠವನ್ನು ಶಿವಮೊಗ್ಗದಲ್ಲಿಯೇ ಸ್ಥಾಪಿಸಬೇಕು ಎಂದರು.

ಶಿವಮೊಗ್ಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾಗಬೇಕೆಂಬ ಕೂಗು ಇಂದು ನಿನ್ನೆಯದಲ್ಲ. 1950ರ ದಶಕದಿಂದಲೇ ಮಧ್ಯಕರ್ನಾಟಕದ ಕೇಂದ್ರಬಿಂದುವಾದ ಶಿವಮೊಗ್ಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾಗಬೇಕು ಎಂಬ ಒತ್ತಾಯ ಮಾಡುತ್ತಾ ಬಂದಿದ್ದೇವೆ. 76 ವರ್ಷಗಳ ಕನಸು ಇನ್ನಾದರೂ ನನಸಾಗಲಿ ಎಂದ ಅವರು, ಸುಪ್ರಿಂ ಕೋರ್ಟ್‍ನ ಪೀಠವನ್ನು ಬೆಂಗಳೂರಿನಲ್ಲಿ ಸ್ಥಾಪಿಸಬೇಕೆಂದು ವಕೀಲರುಗಳು ಒತ್ತಾಯ ಮಾಡಬೇಕಿದೆ ಎಂದು ಅಭಿಪ್ರಾಯ ಪಟ್ಟರು.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ರಚಿಸಿರುವ ಸಮಿತಿಯು ಮಂಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ದಾವಣಗೆರೆ, ಮಡಿಕೇರಿ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ವರದಿ ಸಿದ್ಧಪಡಿಸಲಿದೆ. ಸಮಿತಿಯು ಶಿವಮೊಗ್ಗ ಜಿಲ್ಲೆಗೂ ಭೇಟಿ ನೀಡುವ ಸಾಧ್ಯತೆಯಿದೆ ಎಂದು ಹೋರಾಟ ಸಮಿತಿಯ ಗೌರವಾಧ್ಯಕ್ಷ ಬಸಪ್ಪಗೌಡರು ಹೇಳಿದರು.

ಶಿವಮೊಗ್ಗ ವಕೀಲರ ಸಂಘದ ಜಿ.ಆರ್. ಅಧ್ಯಕ್ಷ ರಾಘವೇಂದ್ರಸ್ವಾಮಿ, ವಕೀಲ ಕೆ.ಪಿ.ಶ್ರೀಪಾಲ್ ಮುಂತಾದವರು ಮಾತನಾಡಿ, ಹಾಸನ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಹೈಕೋರ್ಟ್ ಪೀಠಕ್ಕೆ ಬೇಡಿಕೆ ವ್ಯಕ್ತವಾಗದಿದ್ದರೂ, ಆ ಜಿಲ್ಲೆಗಳನ್ನು ಸಮಿತಿಯ ವ್ಯಾಪ್ತಿಗೆ ಸೇರಿಸಿರುವುದರ ಉದ್ದೇಶವೇನು ಎಂಬ ಪ್ರಶ್ನೆ ಮೂಡಿದೆ. ಎಲ್ಲ ಜಿಲ್ಲೆಗಳ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಕೆಲವು ಜಿಲ್ಲೆಗಳನ್ನು ಕೈಬಿಟ್ಟು, ಶಿವಮೊಗ್ಗ, ಚಿಕ್ಕಮಗಳೂರು, ಮಡಿಕೇರಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳನ್ನು ಮಂಗಳೂರು ಪೀಠದ ವ್ಯಾಪ್ತಿಗೆ ಸೇರಿಸುವ ಉದ್ದೇಶವಿರಬಹುದು ಎಂಬ ಅನುಮಾನವಿದೆ. ಮಂಗಳೂರಿನಲ್ಲಿ ಸಂಚಾರಿ ಪೀಠ ಸ್ಥಾಪಿಸಲು ಅಗತ್ಯವಾದ ಸಂಖ್ಯಾಬಲ ಪಡೆಯುವ ಉದ್ದೇಶದಿಂದ ಶಿವಮೊಗ್ಗ ಜಿಲ್ಲೆಯನ್ನು ಅದರ ವ್ಯಾಪ್ತಿಗೆ ಸೇರಿಸುವ ಪ್ರಯತ್ನ ನಡೆಯುತ್ತಿದೆ. ಶಿವಮೊಗ್ಗವನ್ನು ಮಂಗಳೂರು ಪೀಠದ ವ್ಯಾಪ್ತಿಗೆ ಸೇರಿಸುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.

ಆದರಿಂದ ಶಿವಮೊಗ್ಗದಲ್ಲಿಯೇ ಹೈಕೋರ್ಟ್ ಪೀಠ ಸ್ಥಾಪಿಸಬೇಕು ಎಂದು ಪ್ರತಿಭಟನಾಕಾರರು ಒಕ್ಕೊರಲಿನಿಂದ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹಿರಿಯ ವಕೀಲ ಜಿ.ಎಸ್.ನಾಗರಾಜ್, ವಕೀಲರುಗಳಾದ ವಿದ್ಯಾರಾಣಿ, ಶಾಂತರಾಜು, ಏಕಲವವ್ಯ, ಬಿ.ಎಂ. ಸತ್ಯನಾರಾಯಣ, ಶಶಿಧರ, ರಾಮಚಂದ್ರ, ಷಡಾಕ್ಷರಪ್ಪ ಜಿ.ಆರ್. ಪತ್ರಕರ್ತ ನವೀನ್ ತಲಾರಿ ಸೇರಿದಂತೆ ಹಲವರು ಇದ್ದರು.

